ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ವಯಂ ಚಾಲಿತ ವಾಹನ ಗಣತಿ ಲೋಕೋಪಯೋಗಿ ಇಲಾಖೆ ಶಿವಮೊಗ್ಗ ವೃತ್ತದಿಂದ ಐತಿಹಾಸಿಕ ಹೆಜ್ಜೆ


ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಲೋಕೋಪಯೋಗಿ ಇಲಾಖೆ ಶಿವಮೊಗ್ಗ ವೃತ್ತದಿಂದ ಸ್ವಯಂ ಚಾಲಿತ ವಾಹನ ಗಣತಿ ಸಪ್ತಾಹಕ್ಕೆ ಚಾಲನೆ ನೀಡಲಾಗಿದೆ. ವಾಹನ ಸಂಚಾರ, ದಟ್ಟಣೆಯ ಗಣತಿ ಆಧಾರದ ಮೇಲೆಯೆ ಸರ್ಕಾರ ರಸ್ತೆಗಳ ಅಗಲೀಕರಣ, ರಸ್ತೆಗಳ ನಿರ್ಮಾಣ ಸೇರಿದಂತೆ ರಸ್ತೆ ಸಾರಿಗೆ ಸೌಲಭ್ಯಗಳ ಕುರಿತು ಯೋಜನೆಗಳನ್ನು ರೂಪಿಸುತ್ತದೆ. ಈ ಸಲುವಾಗಿಯೇ ಸರ್ಕಾರ ವಾಹನಗಳ ಗಣತಿಗಾಗಿ ಕೋಟಿಗಟ್ಟಲೆ ಹಣ ವೆಚ್ಚ ಮಾಡುತ್ತದೆಯಾದರೂ ನಿಖರ, ಸ್ಪಷ್ಟ ಮಾಹಿತಿ ಪಡೆಯುವಲ್ಲಿ ವಿಳಂಬ ಹೀಗೆ ಹಲವು ಸಮಸ್ಯೆಗಳು ಎದುರಾಗುತ್ತಿದ್ದವು. ಇದರ ಶಾಶ್ವತ ಪರಿಹಾರಕ್ಕೆ ಲೋಕೋಪಯೋಗಿ ಇಲಾಖೆ ಶಿವಮೊಗ್ಗ ವೃತ್ತ ಇದೇ ಮೊದಲ ಬಾರಿಗೆ ಒಂದು ಹೊಸ ಆಯಾಮಕ್ಕೆ ನಾಂದಿ ಹಾಡಿದೆ. ಪ್ರತಿ ವರ್ಷ ನಡೆಯುವ ವಾಹನ ಗಣತಿ ಸಪ್ತಾಹವನ್ನು ಇದೇ ಮೊದಲ ಬಾರಿಗೆ ಸ್ವಯಂಚಾಲಿತ ಯಂತ್ರಗಳನ್ನು ಬಳಸಿ ಮಾಡುವ ಮೂಲಕ ಇತಿಹಾಸ ನಿರ್ಮಿಸಿದೆ.

ಸಹಜವಾಗಿ ವಾಹನ ಗಣತಿ ಪ್ರಕ್ರಿಯೆಗೆ ಯಾವುದಾದರೂ ಖಾಸಗಿ ಏಜೆನ್ಸಿಯವರನ್ನು ನೇಮಿಸಿಕೊಂಡು ಗಣತಿ ಮಾಡಿಸುವುದು ವಾಡಿಕೆ. ಇದರ ಸಂಪೂರ್ಣ ಫಲಿತಾಂಶ ಒಂದು ಅಂದಾಜಿನಂತೆ ಪ್ರತಿ ವರ್ಷ ಶೇ.10ರಷ್ಟು ವಾಹನ ಸಂಖ್ಯೆ ಹೆಚ್ಚಾಗಿವೆ ಎನ್ನುವುದಾಗಿರುತ್ತಿತ್ತು. ಈ ಆಧಾರದ ಮೇಲೆ ಸರ್ಕಾರ ರೂಪಿಸುವ ಯೋಜನೆಗಳು ವಾಸ್ತವದಲ್ಲಿ ಅಪೂರ್ಣವಾಗುತ್ತಿದ್ದವು. ಇದು ಬಹುಕಾಲದಿಂದ ನಡೆದುಕೊಂಡು ಬಂದಿದ್ದರೂ ಇದಕ್ಕೆ ಒಂದು ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಇರುವ ತಂತ್ರಜ್ಞಾನವನ್ನೇ ಬಳಸಿಕೊಂಡು ವ್ಯಕ್ತಿಗಳಿಂದ ಗಣತಿ ಮಾಡುವ ಬದಲು ಸ್ವಯಂಚಾಲಿತ ಯಂತ್ರದ ಮೂಲಕ ಗಣತಿ ಮಾಡಿದರೆ ನಿಖರ, ಸ್ಪಷ್ಟ ಹಾಗೂ ಶೀಘ್ರ ಫಲಿತಾಂಶ ನಿಗುವುದಲ್ಲದೆ ಗಣತಿಗಾಗಿ ಸರ್ಕಾರ ಮಾಡುವ ಅಧಿಕ ಪ್ರಮಾಣದ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಶಿವಮೊಗ್ಗ ವೃತ್ತದ ಮೂರು ಜಿಲ್ಲೆಗಳಲ್ಲಿ ಒಂದು ಪ್ರಾಯೋಗಿಕ ಪ್ರಯತ್ನ ಮಾಡಲಾಗಿದೆ. ಇದು ಯಶಸ್ವಿಯೂ ಆಗುತ್ತಿದ್ದು ಈ ಮಾದರಿಯನ್ನು ದೇಶಾದ್ಯಂತ ಅಳವಡಿಸಿಕೊಳ್ಳಬಹುದಾಗಿದೆ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆ ಶಿವಮೊಗ್ಗ ವೃತ್ತದ ಅಧೀಕ್ಷಕ ಅಭಿಯಂತರ ಬಿ.ಎಸ್.ಬಾಲಕೃಷ್ಣ.

ಬುಧವಾರದಿಂದ 48ಗಂಟೆಗಳು ನಡೆಯುವ ವಾಹನ ಗಣತಿಯಲ್ಲಿ ಶಿವಮೊಗ್ಗ ವೃತ್ತದ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ 4 ಕಾರ್ಯಪಾಲಕ ಎಂಜಿನಿಯರ್, 21 ಸಹಾಯಕ ಕಾರ್ಯಪಾಲಕ ಎಂಜಿನಿಯರ್ಗಳು, 170 ಸಹಾಯಕ ಎಂಜಿನಿಯರ್ಗಳು ಕಾರ್ಯನಿರ್ವಹಿಸುತ್ತದ್ದಾರೆ. ಒಟ್ಟು 200 ಕ್ಯಾಮರಾಗಳು ವಾಹನ ಗಣತಿ ಪ್ರಕ್ರಿಯೆಯನ್ನು ತೊಡಗಿಸಿದ್ದು, 90 ಕ್ಯಾಮರಾಗಳಿಂದ ರಾಜ್ಯ ಹೆದ್ದಾರಿ ಹಾಗೂ 110 ಜಿಲ್ಲಾ ರಸ್ತೆಗಳ ಗಣತಿ ಆಗುತ್ತಿದೆ. ದಿನದ 24 ಗಂಟೆಯೂ ಬೈಸಿಕಲ್ ಸೇರಿದಂತೆ ಎಲ್ಲ ಬಗೆಯ ವಾಹನಗಳನ್ನೂ ಸೆರೆ ಹಿಡಿಯಲಾಗುತ್ತದೆ. ಇದನ್ನು ಕ್ರೂಡಿಕರಿಸಿ ವರದಿ ತಯಾರಿಸಿದಾಗ ಸ್ಪಷ್ಟ ಗಣತಿ ಲಭ್ಯವಾಗಲಿದೆ ಎಂದರು. ಈ ಪ್ರಕ್ರಿಯೆ ಬಗ್ಗೆ ಲೋಕೋಪಯೋಗಿ ಸಚಿವರಿಗೆ ತಿಳಿಸಿದಾಗ ಸ್ವಯಂಚಾಲಿತ ವಾಹನ ಗಣತಿಗೆ ಅನುಮೋದನೆ ಸಿಕ್ಕದೆ. ಮುಂದಿನ ದಿನಗಳಲ್ಲಿ ಈ ವೃತ್ತದ ಸಾಧಕ ಬಾಧಕಗಳನ್ನು ಗಮನದಲ್ಲಿರಿಸಿಕೊಂಡು ಬರುವ ವರ್ಷ ರಾಜ್ಯಾದ್ಯಂತ ಇದೇ ಮಾದರಿ ಅನುಸರಿಸಲಾಗುತ್ತದೆ ಎಂದು ಅವರು ತಿಳಿಸಿದರು. ಭದ್ರಾವತಿ ಸಮೀಪದ ಕಡದಕಟ್ಟೆ ಬೆಂಗಳೂರು-ಹೊನ್ನಾವರ ರಾಜ್ಯ ಹೆದ್ದಾರಿ 68ರಲ್ಲಿ ನಿರ್ಮಿಸಿರುವ ಸ್ವಯಂ ಚಾಲಿತ ವಾಹನ ಗಣತಿ ಕೇಂದ್ರದಲ್ಲಿ ಲೋಕೋಪಯೋಗಿ ಇಲಾಖೆ ವಿಶೇಷ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಎಂ.ಚಂದ್ರಹಾಸ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಾಗೀಶ್, ಸಹಾಯಕ ಎಂಜಿಯರ್ ಮುಕುಂದರಾಜ್ ಮತ್ತಿತರರು ಉಪಸ್ಥಿತರಿದ್ದರು.
 source: web8.kar.nic.in/diprpressandnews/ 



No comments:

Post a Comment

Popular Posts

Tags